Friday 22 November 2019

Channagiri Channakeshava temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಕರ್ನಾಟಕದ ವಾಸ್ತು ಶಿಲ್ಪಗಳ ದೇವಾಲಯಗಳ ದರ್ಶನ ಮಾಡಿದವರು ಹಲವು ಸುಂದರ ದೇವಾಲಯಗಳನ್ನ ನೋಡಿರುತ್ತಾರೆ.  ಇವುಗಳಲ್ಲಿ ಹಲವು ದೇವಾಲಯಗಳು ಮನಸಿನಲ್ಲಿ ಪಡಿಯುಚ್ಚು ಮೂಡಿಸಿದರೆ ಕೆಲವು ದೇವಾಲಯಗಳ ಶಿಲ್ಪಗಳು ಗಮನ ಸೆಳೆಯುತ್ತವೆ. ಕೆಲವೆಡೆ ಎರಡೂ ಸುಂದರವಾಗಿರುತ್ತವೆ.  ಆದರ ಇನ್ನು ಕೆಲವು ದೇವಾಲಯಗಳ ದೇವಾಲಯ ಸಾಮನ್ಯವಾದರೂ ಮೂರ್ತಿಗಳು ಮನಸಿನಲ್ಲಿ ಹಾಗೆಯೇ ಊಳಿದು ಗಮನ ಸೆಳೆದಿರುತ್ತವೆ.  ಅಂತಹ ದೇವಾಲಯಗಳಲ್ಲಿ ಚನ್ನಗಿರಿಯ ಚನ್ನಕೇಶವನ ಮೂರ್ತಿಯೂ ಒಂದು.

ಚನ್ನಗಿರಿಯ ಹೃದಯ ಭಾಗದಲ್ಲಿರುವ ಈ ದೇವಾಲಯ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ತುಂಬಾ ಹತ್ತಿರದಲ್ಲಿದೆ. ಕೇಶವ ಮತ್ತು ಕಲ್ಲೇಶ್ವರ ದೇವಾಲಯ ಎಂದು ಕರೆಯುವ ಈ ದೇವಾಲಯ ನೆಲ ಮಟ್ಟಕಿಂತ ತಗ್ಗಿನಲ್ಲಿದ್ದು ತ್ರಿಕೂಟಾಚಲ ಶೈಲಿಯಲ್ಲಿದೆ. ಮೂರು ಗರ್ಭಗುಡಿ, ಅಂತರಾಳ ಮತ್ತು ಒಂದೇ ನವರಂಗ ಹೊಂದಿದ್ದು ಮೂಲತಹ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದೆ.

ಪಶ್ಚಿಮದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಪ್ರವೇಶದ್ವಾರ ಪುಷ್ಪ ಶಾಖೆಗಳಿಂದ ಅಲಂಕೄತಗೊಂಡಿದೆ. ಲಲಾಟದಲ್ಲಿ ಗಜಲಕ್ಷ್ಮೀ ಕೆತ್ತೆನೆ ಇದೆ.  ಉತ್ತರದ ಗರ್ಭಗುಡಿಯೇ ಈ ದೇವಾಲಯದಲ್ಲಿ ದೇವಾಲಯದ ಮುಕುಟ ಎನ್ನಬಹುದಾದ ಸುಂದರ ಕೇಶವನ ಮೂರ್ತಿ ಇದೆ. ಕೇಶವನ ಮೂರ್ತಿ ಸುಂದರವಾಗಿ ಕೆತ್ತಲಾಗಿದ್ದು ಪ್ರಭಾವಳಿಯಲ್ಲಿ ದಶವಾತಾರದ ಸುಂದರ ಕೆತ್ತೆನೆ ಇದೆ.  ಕೈನಲ್ಲಿ ಶಂಖ, ಚಕ್ರ,  ಗಧಾ ಮತ್ತು ಕಮಲ ಹಿಡಿದಿದ್ದು ಸಂದರವಾದ ಕೆತ್ತೆನೆಯ ಕಿರಿಟವಿದೆ. ಕೊರಳಲ್ಲಿನ ಹಾರ, ಉದರಭಂದ, ಉಪವೀತ, ಕೈಗಡಗ, ಕಾಲ್ಗಡಗ ಮುಂತಾದ ಆಭರಣಗಳಿಂದ ಅಲಂಕೄತಗೊಂಡಿದ್ದು ಶಿಲ್ಪದ ಇಕ್ಕೆಲದಲ್ಲೂ ಶ್ರೀ ದೇವಿ ಮತ್ತು ಭೂದೇವಿಯ ಸುಂದರ ಕೆತ್ತೆನೆ ಇದೆ. ಸುಮಾರು ೬ ಅಡಿ ಎತ್ತರದ ಈ ಶಿಲ್ಪ ಪ್ರವೇಶ ದ್ವಾರಕ್ಕಿಂತೆ ಎತ್ತರವಾಗಿದ್ದು ಹೊಯ್ಸಳ ಶೈಲಿಯನ್ನು ಹೋಲುತ್ತಿದ್ದು ನಂತರದ ಸೇರ್ಪಡೆಯಂತೆ ತೋರುತ್ತದೆ.  ಪೂರ್ವದ ಗರ್ಭಗುಡಿ ಖಾಲಿ ಇದ್ದು ಯಾವ ಶಿಲ್ಪವೂ ಇಲ್ಲ.  ಬಹುಷ: ನಾಶ ಆಗಿರಬಹುದು ಅಥವಾ ಸ್ಥಳಾಂತರಗೊಂಡಿರಬಹುದು.

ನವರಂಗದ ಮಧ್ಯದಲ್ಲಿ ನಾಲ್ಕು ಕಂಭಗಳಿದ್ದು ತಿರುಗಣೆಯಿಂದ ಕಡೆದ ಕಂಭಗಳು. ಕಂಭಗಳ ಪಾದ ಭಾಗದಲ್ಲಿ ಉಬ್ಬು ಶಿಲ್ಪಗಳಿದ್ದು ವಿತಾನ (ಭುವನೇಶ್ವರಿ) ದಲ್ಲಿ ಸುಂದರ ಅರಳಿದ ಪದ್ಮದ ಅಲಂಕಾವಿದೆ. ದೇವಾಲಯ ತಗ್ಗಿನಲ್ಲಿರುವದರಿಂದ ಬಹುಷಹ ಅಧಿಷ್ಟಾನ ಹೂತು ಹೋಗಿರಭಹುದು. ಮೇಲ್ಚಾವಣಿ ಸಮತಟ್ಟಾಗಿದ್ದು ಶಿಖರದ ಭಾಗ ನಾಶವಾಗಿದೆ. ಮೂಲತಹ ೧೨ ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನವೀಕರಣಗೊಂಡಿದೆ.

ಇಲ್ಲಿ ಮತ್ತೊಂದು ರಾಮಲಿಂಗೇಶ್ವರ ದೇವಾಲಯ ಹೊರಭಾಗದಲ್ಲಿ ರಸ್ತೆಯ ಪಕ್ಕದಲ್ಲಿದ್ದು ಈಗ ನವೀಕರಣಗೊಂಡಿದೆ.  ಈ ದೇವಾಲಯ ಸಹ ಗರ್ಭಗುಡಿ, ಅಂತರಾಳ ಮತ್ತು ಒಂದೇ ನವರಂಗ ಹೊಂದಿದೆ. ಇಲ್ಲಿ ಪಶ್ಚಿಮ ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗ ಮತ್ತು ನಂದಿ ಇದ್ದು (ಈಗ ನವೀಕರಣ ನಿಮಿತ್ತ ಉರಿನಲ್ಲಿ ಇರಿಸಲಾಗಿದೆ) ಪ್ರವೇಶ್ವರ ತ್ರಿಶಾಖ ಕೆತ್ತೆನೆ ಹೊಂದಿದೆ. ಶೈವ ದ್ವಾರ ಪಾಲಕರು ಇದ್ದು ಲಲಾಟದಲ್ಲಿ ಗಜ ಲಕ್ಷ್ಮೀ ಕೆತ್ತೆನೆ ಇದೆ. ಉಳಿದ ಗರ್ಭಗುಡಿಯಲ್ಲಿ ಯಾವ ಶಿಲ್ಪಗಳು ಕಾಣ ಬರುವದಿಲ್ಲ ಪ್ರವೇಶ ದ್ವಾರಗಳು ಸಾಧರಾಣವಾಗಿದೆ. ಹೊರಭಿತ್ತಿಯ ಅಲಂಕಾರ ಸರಳವಾಗಿದ್ದು ಶಿಖರ ನೂತನ ನಿರ್ಮಾಣ. ಈ ದೇವಾಲಯ ಸಹ ೧೨ ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ.

ತಲುಪುವ ಬಗ್ಗೆ : ಚನ್ನಗಿರಿ ಚಿತ್ರದುರ್ಗ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವದರಿಂದ ಸುಲಭವಾಗಿ ತಲುಪಬಹುದು. ಶಿವಮೊಗ್ಗದಿಂದ ಸುಮಾರು ೪೩ ಕಿ ಮೀ ಹಾಗು ಚಿತ್ರದುರ್ಗದಿಂದ ಸುಮಾರು ೫೫ ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


No comments:

Pavagada Shaneeswara Temple