Tuesday 28 April 2020

Shakatapura Shankaracharya Badari Peetha

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಕರ್ನಾಟಕದಲ್ಲಿ ಶೃಂಗೇರಿಯ ಹಲವು ಶಾಖ ಮಠಗಳಿವೆ.  ಆದರೆ ಬದರಿ ಶಂಕರಾಚಾರ್ಯ ಪೀಠದ ಸಂಸ್ಥಾನದ ಶಾಖೆ ಕರ್ನಾಟದಲ್ಲಿ ಇದೆ ಎಂಬದು ಬಹಳ ಜನರಿಗೆ ತಿಳಿದಿಲ್ಲ.  ಅಂತಹ ಅಪುರೂಪದ ಶಾಖೆಯೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ತುಂಗಾ ನದಿ ತೀರದಲ್ಲಿರವ ಶಕಟಪುರದ (ಬಂಡೀಗುಡಿ) ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ ಅಥವಾ ಶ್ರೀ ವಿದ್ಯಾಪೀಠಂ

ಶ್ರೀ ಮಠದ ಇತಿಹಾಸ ಪುಟಗಳ ನೋಡಿದಲ್ಲಿ ವಿಜಯನಗರ ಕಾಲದಲ್ಲಿ (ಸುಮಾರು ೧೪ ನೇ ಶತಮಾನ)  ಹಲವು ಕಾಣದ ಕೈಗಳ ತೊಂದರೆಯಿಂದ ಜಗದ್ಗುರು ಶ್ರೀ ಸತ್ಯತೀರ್ಥ ಮಹಾಮುನಿಗಳು ಬದರೀನಾಥದಿಂದ ಶಾಂತಿಯನ್ನ ಅರಸುತ್ತಾ ಬರುತ್ತಾರೆ.  ಆಗ ಶೃಂಗೇರಿಗೆ ಹತ್ತಿರ ಇದ್ದ ಶಕಟಪುರದ ತುಂಗಾ ನದಿಯ ತೀರದಲ್ಲಿ ತಮ್ಮ ಧ್ಯಾನವನ್ನು ಮುಂದುವರಿಸಲು ನಿರ್ಧರಿಸುತ್ತಾರೆ.  ಅಲ್ಲಿಯೇ ಬದರಿಯ ಶಂಕರಾಚಾರ್ಯ ಸಂಸ್ಥಾನದ ಪೀಠವನ್ನು ಸ್ಥಾಪಿಸುತ್ತಾರೆ. ಪುರಾಣದಂತೆ ಇಲ್ಲಿ ಶಕಟಮುನಿಗಳು ನೆಲೆಸಿದ್ದ ಕಾರಣ ಇಲ್ಲಿಗೆ ಶಕಟಪುರ ಎಂಬ ಹೆಸುರು ಬಂದಿತು ಎಂಬ ನಂಬಿಕೆ ಇದೆ.

ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಾಣವಾದ ಡ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಇಲ್ಲಿನ ದೇವಾಲಯ ಮೂರು ಗರ್ಭಗುಡಿ, ಪ್ರದಕ್ಷಿಣಾ ಪಥ ಮತ್ತು ಪ್ರವೇಶ ಮಂಟಪವನ್ನು ಹೊಂದಿದೆ.  ಇಲ್ಲಿನ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವಿದ್ಯಾ ರಾಜ ರಾಜೇಶ್ವರಿ, ಶ್ರೀ ವೇಣುಗೋಪಾಲ ಕೃಷ್ಣ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಶಿಲ್ಪಗಳಿವೆ. ಇಲ್ಲಿ ಶ್ರೀ ಶಂಕರಾಚಾರ್ಯರ ಮೂರ್ತಿಯೂ ಇದೆ.  ದೇವಾಲಯಕ್ಕೆ ಚಿಕ್ಕ ಗೋಪುರವಿದ್ದರೆ ಪ್ರವೇಶದಾಲಿ ಬೃಹತ್ ರಾಜ ಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯದ ಮಂಟಪದ ಮೇಲಿನ ಕೋಷ್ಟಕಗಳಲ್ಲಿನ ಕೆತ್ತೆನೆ ಗಮನ ಸೆಳೆಯುತ್ತದೆ.

ಪ್ರಸ್ತುತ ೩೩ ನೇ ಪೀಠಾಧಿಪತಿಯಾಗಿ ಶ್ರೀ ವಿದ್ಯಾಭಿನವ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳು ವೇದ, ವೇದಾಂತ ಪಾರಂಗತರಾಗಿ ಮಠದ ಆಧ್ಯಾತ್ಮ ಕೈಂಕರ್ಯಗಳನ್ನ ಭಕ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.  ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ನಾಡಿನ ಉದ್ದಗಲಕ್ಕೂ ಚಲಿಸಿ ಧರ್ಮ ಪ್ರಚಾರದ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡುತ್ತ ಬಂದಿದ್ದು ಗೋ ಶಾಲೆ, ವೇದ ಪಾಠ ಶಾಲೆ, ಯಜ್ನ ಶಾಲೆ, ಬೃಹತಾದ ಮಠದ ಪ್ರಾಂಗಣ ನಿರ್ಮಿಸಿದ್ದಾರೆ.  ಪ್ರಶಾಂತ ವಾತಾವರಣದಲ್ಲಿರುವ ಈ ಮಠ ಅಧ್ಯಾತ್ಮದ ವಿಶ್ರಾಂತಿ ಬಯಸುವವರಿಗೆ ಉತ್ತಮ ಸ್ಥಳ.

ತಲುಪವ ಬಗ್ಗೆ : ಶಿವಮೊಗ್ಗ / ಚಿಕ್ಕಮಗಳೂರು – ಕೊಪ್ಪ – ಹರಿಹರಪುರ ಮಾರ್ಗದಲ್ಲಿ ಆಗುಂಬೆಗೆ ಹೋಗುವ ದಾರಿಯಲ್ಲಿ ಹೋಗಿ ಕಮ್ಮರಡಿಗೆ ಹೋಗುವ ದಾರಿಯಲ್ಲಿ ತಿರುವ ತೆಗೆದುಕೊಂಡು ಶಕಟಪುರವನ್ನ ತಲುಪಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



No comments:

Pavagada Shaneeswara Temple