Monday, 27 April 2020

Muthakuru Sri Lakshmi Narayana Temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ವಿಜಯನಗರ ಕಾಲದ ದೇವಾಲಯಗಳು ನಮ್ಮ ನಾಡಿನಲ್ಲಿ ಇದ್ದಂತೆ ಪಕ್ಕದ ರಾಜ್ಯಗಳಲ್ಲಿ ಸಾಕಷ್ಟು ಇವೆ.  ಅವುಗಳಲ್ಲಿ ಕರ್ನಾಟಕದ ಶಿರಾ ತಾಲ್ಕೂಕಿಗೆ ಹೊಂದಿಕೊಂಡಂತೆ ಇರುವ ಮುತಕೂರಿನಲ್ಲಿ ಸುಂದರ ಶಿಲ್ಪ ಹೊಂದಿರುವ ದೇವಾಲಯ ಒಂದಿದೆ.  ಇಲ್ಲಿ ಶ್ರೀ ಲಕ್ಶ್ಮೀ ನಾರಾಯಣ ಎಂದು ಕರೆಯುವ ಸುಂದರ ದೇವಾಲಯ ಇದೆ.

ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಸುಮಾರು ಏಳು ಅಡಿ ಎತ್ತರದ ಮೂರ್ತಿ ಇದೆ.  ಮೂರ್ತಿ ಶಂಖ, ಚಕ್ರ, ಗದೆ ಹಾಗು ಅಭಯ ಹಸ್ತ ಹೊಂದಿದ್ದು ಅದರಲ್ಲಿ ಪದ್ಮವಿದೆ.  ಮೂಲತಹ ಕೇಶವ ಮೂರ್ತಿ ಸ್ವರೂಪ ಹೊಂದಿರುವ ಈ ಮೂರ್ತಿಯ ಪಕ್ಕದಲ್ಲಿ ಪ್ರತ್ಯಕ ಲಕ್ಷ್ಮೀ ಮೂರ್ತಿ ಇರುವ ಕಾರಣ ಶ್ರೀ ಲಕ್ಶ್ಮೀ ನಾರಾಯಣ ಎಂದೇ ಭಕ್ತರಲ್ಲಿ ಪ್ರಸಿದ್ದಿ ಪಡೆದಿದೆ.  ಸುಂದರವಾದ ಕೊರಳಿನ ಆಭರಣ, ನಡುವಿನ ಪಟ್ಟಿ, ಕಾಲಿನ ಕಡಗದ ಕಲಾತ್ಮಕ ಕೆತ್ತೆನೆಗಳು ಮೂರ್ತಿಯನ್ನು ಸುಂದರವಾಗಿ ಕಾಣುವಂತೆ ಮಾಡಿದೆ.  ಪಕದಲ್ಲಿ ಶಂಖ, ಚಕ್ರಧಾರಿಯಾದ ಶ್ರೀ ಲಕ್ಶ್ಮೀ ದೇವಿಯ ಮೂರ್ತಿ ಇದೆ.

ದೇವಾಲಯವನ್ನು ಉರಿನವರು ನವೀಕರಿಸಿದ್ದು ವಿಶಾಲವಾದ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ.  ಇಲ್ಲಿ ನೂತನ ದ್ವಜ ಸ್ಥಂಭವನ್ನು ನಿರ್ಮಿಸಲಾಗಿದೆ. ವೈಶಾಖ ಮಾಸದಲ್ಲಿ ಇಲ್ಲಿ ಉತ್ಸವ ನಡೆಯಲಿದ್ದು ಕಲ್ಯಾಣೋತ್ಸವ, ವಿವಿಧ ಹೋಮಗಳನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


ದೇವಾಲಯದ ಎದುರು ಭಾಗದಲ್ಲಿ ಹತ್ತು ಅಡಿ ಎತ್ತರದ ಉಬ್ಬು ಶಿಲ್ಪದ ಆಂಜನೇಯ ಮೂರ್ತಿಯನ್ನ ಬಂಡೆಯ ಮೇಲೆ ಕೆತ್ತಲಾಗಿದೆ.  ಉರಿನ ಮಧ್ಯದಲ್ಲಿ ಸುಂದರ ಶಿವಾಲಯ ಇದ್ದು ಶಿವಲಿಂಗವಿದೆ. ದೇವಾಲಯದ ಪ್ರಾಕಾರದ ಗೋಡೆಯ ಮೇಲಿನ ದೇವ ಕೋಷ್ಟಕಗಳಲ್ಲಿನ ಗಾರೆ ಶಿಲ್ಪಗಳು ಗಮನ ಸೆಳೆಯುತ್ತವೆ. ಇಲ್ಲಿ ಸುಂದರ ಶಿವಲೀಲಾ ಮೂರ್ತಿಗಳ ಕೆತ್ತೆನೆ ನೋಡಬಹುದು.

ಸ್ಥಳ ಪುರಾಣದಂತೆ ಇಲ್ಲಿ ವಿಜಯನಗರ ಕಾಲದಲ್ಲಿ ಮುತ್ತುಗಳನ್ನ ಮಾರುತಿದ್ದರಿಂದ ಮುತಕೂರು ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.

ತಲುಪುವ ಬಗ್ಗೆ : ಬೆಂಗಳೂರು – ಶಿರಾ – ಬರಗೂರು – ಹಾರೊಗೆರೆ ಮಾರ್ಗವಾಗಿ ತಲುಪಬಹುದು. ಶಿರಾದಿಂದ ಸುಮಾರು ೪೦ ಕಿ ಮೀ ದೂರದಲ್ಲಿ ಈ ದೇವಾಲಯ ಇದೆ.


ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



No comments:

Pavagada Shaneeswara Temple